ಕಿಂಡರ್‍ಗಾರ್ಟನ್

 ಜರ್ಮನ್ ಶಿಕ್ಷಣಪಂಡಿತ ಫ್ರೀಡ್ರಿಷ್ ಫ್ರೊಬೆಲ್ (1782-1852) ಎಂಬಾತ 3 ರಿಂದ 5 ವರ್ಷದ ಮಕ್ಕಳಿಗಾಗಿ ಅವರ ಆಟ ಮುಂತಾದ ಸ್ವಾಭಾವಿಕ ಆಸಕ್ತಿಗಳನ್ನು ಬಳಸಿಕೊಂಡು ವಿಶಿಷ್ಟ ರೀತಿಯ ಉಪಕರಣ ಮತ್ತು ಕಾರ್ಯಕ್ರಮಗಳ ಮೂಲಕ ಅವರ ಸರ್ವತೋಮುಖವಾದ ವಿಕಾಸವನ್ನು ಸಾಧಿಸಲು ಆರಂಭಿಸಿದ ಪ್ರಾಥಮಿಕ ಪೂರ್ವದ ಒಂದು ಶಿಕ್ಷಣಪದ್ಧತಿ. 'ಶಾಲೆಯೇ ಒಂದು ತೋಟ: ಅಲ್ಲಿನ ಮಕ್ಕಳೇ ಎಳೆಯ ಸಸಿಗಳು, ಅಧ್ಯಾಪಕರೇ ಅದಕ್ಕೆ ನೀರೆರೆದು ಪೋಷಿಸುವ ತೋಟಗಾರರು' ಎಂಬ ಭಾವನೆಯನ್ನು ತಳೆದಿದ್ದ ಫ್ರೊಬೆಲ್ ತನ್ನ ಶಾಲೆಯನ್ನು ಕಿಂಡರ್‍ಗಾರ್ಟನ್ (ಮಕ್ಕಳ ತೋಟ) ಎಂದೇ ಕರೆದ. ಶಿಕ್ಷಣದ ಬಗ್ಗೆ ಅವನದು ಆಧ್ಯಾತ್ಮಕ ದೃಷ್ಟಿ: ಜನತೆಯಲ್ಲಿ ಅದು ಆಧ್ಯಾತ್ಮಿಕ ಭಾವನೆಯನ್ನು ಪೋಷಿಸಬೇಕೆಂಬುದು ಅವನ ನಂಬಿಕೆ. ದೈವದತ್ತವಾಗಿ ಬಂದಿರುವ ಶಕ್ತಿಸಾಮಥ್ರ್ಯಗಳು ಮಕ್ಕಳಲ್ಲಿ ಅಡಗಿವೆಯೆಂದೂ ಶಿಕ್ಷಣದಿಂದ ಅವು ಹೊರಹೊಮ್ಮಬೇಕೆಂದೂ ಅವನು ಭಾವಿಸಿದ್ದ. ಅವನಿಗೂ ಹಿಂದಿದ್ದ ಪೆಸ್ಟಲಾಜಿ ಸೂಚಿಸಿದ್ದಂತೆ ಮಕ್ಕಳ ಬಗ್ಗೆ ಪ್ರೇಮಾಸಕ್ತ್ತಿಗಳನ್ನು ತಳೆದು ಅವರ ಶಿಕ್ಷಣವನ್ನು ರೂಪಿಸಬೇಕೆಂಬುದು ಫ್ರೊಬೆಲ್ಲರ ಭಾವನೆಯೂ ಆಗಿತ್ತು.

 ಶೈಶವ ವ್ಯಕ್ತಿಯ ಒಳಗಿನ ಅಂಶ (ಆಟದ ಆಸಕ್ತಿ) ಹೊರಹೊಮ್ಮುವ ಕಾಲವೆಂದೂ ಬಾಲ್ಯ ಹೊರಗಿನ ಅಂಶ ಒಳಹೋಗುವ (ಕಲಿಯುವ) ಕಾಲವೆಂದೂ ಫ್ರೊಬೆಲ್ ನಂಬಿದ್ದ. ಆದ್ದರಿಂದ ಅವನು ತನ್ನ ಶಾಲೆಯಲ್ಲಿ ಆಟಕ್ಕೆ ಪ್ರಾಶಸ್ತ್ಯವಿತ್ತ. ಮಕ್ಕಳಿಗೆ ಆಟವೇ ಸ್ವಾಭಾವಿಕ ಜೀವನ. ಆಗ ಅವರು ಸಂತೋಷವನ್ನು ವ್ಯಕ್ತಪಡಿಸುವುದು ಆಟದ ಮೂಲಕ. ಅಂಥ ಆಟ ದೈವಲೀಲೆಗೆ ಸಮಾನ. ಆ ಆಟಗಳಿಂದ ಮಕ್ಕಳಿಗೆ ನೆಮ್ಮದಿಯೂ ತೃಪ್ತಿಯೂ ದೊರಕುವುವು. ಆದ್ದರಿಂದ ಮಕ್ಕಳ ಎಲ್ಲ ಮುಖವಾದ ಶಿಕ್ಷಣಕ್ಕೂ ಅವರ ಆಟದ ಆಸಕ್ತಿಯನ್ನೇ ಆತ ಆಧಾರ ಮಾಡಿಕೊಂಡ.

 ಫ್ರೊಬೆಲ್ ತನ್ನ ಶಾಲೆಗೆ ಪಠ್ಯವಸ್ತುವನ್ನು ಗೊತ್ತುಮಾಡಲಿಲ್ಲ. ಪಠ್ಯಪುಸ್ತಕಗಳನ್ನೂ ಬಳಸಲಿಲ್ಲ. ಓದು ಬರಹ ಲೆಕ್ಕಗಳನ್ನು ಕಲಿಯಲು ಅದು ಸೂಕ್ತವಾದ ಕಾಲವಲ್ಲವೆಂಬುದೇ ಅದಕ್ಕೆ ಕಾರಣ. ಆಟದ ಮೂಲಕ ಮಕ್ಕಳು ಚಟುವಟಿಕೆಯಿಂದಿದ್ದು ಸ್ವಪ್ರಯತ್ನದಿಂದ ಅನುಭವ ಪಡೆಯುವ ಆವಕಾಶವಿರುವುದರಿಂದ ಅವರಿಗೆ ಆಟವೇ ಪರಿಣಾಮಕಾರಿಯಾದ ಶೈಕ್ಷಣಿಕ ಕಾರ್ಯಕ್ರಮವೆಂದಾತ ನಿರ್ಧರಿಸಿದ. ಅದಕ್ಕೆ ಸಹಾಯಕವೆನಿಸುವಂತೆ ವಿಶಿಷ್ಟರೀತಿಯ ಆಟಗಳನ್ನು (ಫ್ರೊಬೆಲ್ಸ್ ಗಿಫ್ಟ್ಸ್) ಕಾರ್ಯಶ್ರೇಣಿಗಳನ್ನೂ ಆತ ನಿಯೋಜಿಸಿದ. ಆಟಿಕೆಗಳಲ್ಲಿ ಕೆಲವು ಗೋಳಾಕಾರವಾಗಿವೆ; ಇನ್ನು ಕೆಲವು ದುಂಡನೆಯ ತುಂಡುಗಳಂತಿವೆ; ಮತ್ತೆ ಕೆಲವು ಸಮಾನಮುಖಗಳ ಘನಾಕೃತಿಗಳಂತಿವೆ. ಮಕ್ಕಳು ಅವನ್ನು ಬಳಸಿಕೊಂಡು ಆಡುವರು. ಅಂಥ ಒಂದು ಆಟವನ್ನು ಇಲ್ಲಿ ಸೂಚಿಸಬಹುದು. ಪ್ರತಿಯೊಂದು ಮಗುವಿಗೂ ಆರು ಸಮಾನಮುಖಗಳ ಘನಾಕೃತಿಯೊಂದನ್ನು ಕೊಟ್ಟು ಅಧ್ಯಾಪಕರು ಆ ಆಟಕ್ಕೆಂದೇ ರಚನೆಯಾಗಿರುವ 'ಆರು ಮುಖಗಳು ನನಗೆ ಘನವಸ್ತು ನಾನು; ಉದ್ದದಲು ಅಗಲದಲು ಎಲ್ಲ ಮುಖ ಒಂದೆ, ನನ್ನ ಸರಿಸಮನಾಗಿ ಹೋಳೆರಡುಮಾಡು, ಈ ಆಟ ಬಲು ಚೆಂದ. ಇಬ್ಭಾಗ ಮಾಡು'-ಎಂಬರ್ಥದ ಗೀತೆಯನ್ನು ಹೇಳಿಕೊಡುವರು. ಆ ಘನಾಕೃತಿ ಸುಲಭವಾಗಿ ಬೇರ್ಪಡಿಸಬಹುದಾದ ಹೋಳುಗಳಿಂದಾಗಿರುತ್ತದೆ. ಮಕ್ಕಳು ಅದು ಆರು ಮುಖಗಳನ್ನೂ ನೋಡಿಕೊಂಡು ಹಾಡು ಸೂಚಿಸುವಂತೆ ಆದನ್ನು ಎರಡು ಭಾಗ ಮಾಡಿಕೊಂಡು ಆಡುವರು. ಪ್ರಪಂಚದ ಬೇರೆ ಬೇರೆ ಮುಖಗಳು ಬೇರೆಬೇರೆಯಾಗಿ ತೋರಿದರೂ ಅವೆಲ್ಲ ಒಂದಕ್ಕೊಂದಕ್ಕೆ ಸಮವೆಂಬ ಭಾವನೆಯನ್ನು ಮೂಡಿಸಲು ಈ ಆಟವನ್ನು ಏರ್ಪಡಿಸಿದೆ. ಇದರಂತೆ ಗೋಳ ಮತ್ತು ಉರುಳೆಗಳನ್ನೂ ಆಟಕ್ಕೆ ಬಳಸಲಾಗುವುದು. ಈ ಆಟಗಳಿಂದ ಫ್ರೊಬೆಲ್ ಭಾವಿಸಿದ್ದ ಸೂಕ್ಷ್ಮಭಾವನೆಗಳು ಮಕ್ಕಳಲ್ಲಿ ಮೂಡಬಲ್ಲವೇ ಎಂದು ಯಾರಾದರೂ ಅನುಮಾನಿಸಬಹುದಾದರೂ ಅವು ಮಕ್ಕಳಿಗೆ ತೃಪ್ತಿಸಂತೋಷಗಳನ್ನು ತರುವುವೆಂಬುದನ್ನು ಮಾತ್ರ ಅನುಮಾನಿಸುವಂತಿಲ್ಲ. ಅದಕ್ಕಾಗಿ ಬಳಸುವ ಆಟಿಕೆಗಳು ಮಕ್ಕಳ ಕೈಕಾಲುಗಳಿಗೂ ಜ್ಞಾನೇಂದ್ರಿಯಗಳಿಗೂ ಒಳ್ಳೆಯ ವ್ಯಾಯಾಮವನ್ನೂ ಅಭ್ಯಾಸವನ್ನೂ ಒದಗಿಸುತ್ತವೆ; ವಿಕಸಿಸುತ್ತಿರುವ ಅವುಗಳ ಮನಸ್ಸನ್ನು ಪ್ರಚೋದಿಸಿ ನಿರ್ದೇಶಿಸುವುದಕ್ಕೂ ನೆರವಾಗುತ್ತವೆ. ಇಂಥ ಆಟಗಳಲ್ಲದೆ ಫ್ರೊಬೆಲ್ ಕೆಲವು ಇತರ ಚಟುವಟಿಕೆಗಳನ್ನೂ ತನ್ನ ಕಲಿಕೆ ಕ್ರಮದಲ್ಲಿ ಸೇರಿಸಿದ್ದಾನೆ. ರಂಧ್ರ ಕೊರೆಯುವುದು, ಹೊಲಿಯುವುದು, ಚಿತ್ರ ಬರೆಯುವುದು, ಒಂದರೊಡನೊಂದನ್ನು ನುಲಿಯುವುದು, ನೇಯುವುದು, ಕತ್ತರಿಸುವುದು, ಮಡಿಸುವುದು, ಮಾದರಿಗಳನ್ನು (ಮಣ್ಣು, ಮೇಣ ಇತ್ಯಾದಿಗಳಿಂದ) ಮಾಡುವುದು-ಇವು ಆ ಚಟುವಟಿಕೆಗಳಲ್ಲಿ ಮುಖ್ಯವಾದವು.

 ಈಚೆಗೆ ಕಿಂಡರ್‍ಗಾರ್ಟನ್ ಶಾಲೆಯಲ್ಲಿ ಫ್ರೊಬೆಲ್ಲನ ಆಟಿಕೆಗಳನ್ನು ಬಳಸುತ್ತಿರದ್ದರೂ ಅವೇ ಅಲ್ಲಿ ಅಷ್ಟು ಪ್ರಧಾನವೆನಿಸಿಲ್ಲ. ಅದಕ್ಕೆ ಆತ ನೀಡಿದ್ದ ದೈವಿಕಸಂಕೇತವನ್ನಾಗಲೀ ಅವುಗಳ ಮೂಲಕ ಮಕ್ಕಳು ದೇವರಲ್ಲಿ ಭಕ್ತಿಭಾವವನ್ನು ಬೆಳಸಿಕೊಳ್ಳುವರೆಂಬ ಅಂಶವನ್ನಾಗಲೀ ಇಂದಿನವರು ಒಪ್ಪುತ್ತಿಲ್ಲ. ಅದರೆ, ಮಕ್ಕಳ ಸ್ವಾಭಾವಿಕ ಆಸಕ್ತಿಗಳನ್ನು ಅವರ ಶಿಕ್ಷಣಕ್ಕಾಗಿ ಬಳಸಿಕೊಳ್ಳುವ ಅಗತ್ಯವನ್ನು ತೋರಿಸಿಕೊಟ್ಟ ಮೊದಲಿಗನೆಂದು ಶಿಕ್ಷಣ ಜಗತ್ತು ಅವನನ್ನು ಗೌರವಿಸುತ್ತಿದೆ. ಶೈಶವದಲ್ಲಿ ತಮ್ಮ ಭಾವನೆಗಳನ್ನೂ ಆಸಕ್ತಿಗಳನ್ನೂ ಹೊರಪಡಿಸಲು ಮಕ್ಕಳಿಗೆ ಸ್ವಾತಂತ್ರ್ಯವನ್ನೂ ಚಟುವಟಿಕೆಯ ಸನ್ನಿವೇಶಗಳನ್ನೂ ಒದಗಿಸುವ ಅಗತ್ಯವನ್ನೂ ಅವರು ಶಿಕ್ಷಣದಲ್ಲಿ ಆಟದ ಪ್ರಾಮುಖ್ಯವನ್ನು ಆರಿತುಕೊಳ್ಳಬೇಕಾದ ಅಗತ್ಯವನ್ನೂ ಅವರು ಶಿಕ್ಷಣದಲ್ಲಿ ಆಟದ ಪ್ರಾಮುಖ್ಯವನ್ನು ಅರಿತುಕೊಳ್ಳಬೇಕಾದ ಅಗತ್ಯವನ್ನೂ ಸೂಚಿಸಿ ಶಿಕ್ಷಣಕ್ಕೆ ಶಾಸ್ತ್ರೀಯ ತಳಹದಿಯನ್ನು ಹಾಕಿಕೊಟ್ಟ ಕೀರ್ತಿಯೂ ಅವನಿಗೆ ಸಲ್ಲುತ್ತದೆ.

 ವ್ಯಕ್ತಿತ್ವ ನಿರೂಪಣೆಯಲ್ಲಿ ಶೈಶವ ಮತ್ತು ಬಾಲ್ಯದಲ್ಲಿ ದೊರಕುವ ಅನುಭವಗಳು ಮುಂದಿನ ಜೀವನವನ್ನು ಮಹತ್ತರವಾಗಿ ಪರಿಣಾಮಗೊಳಿಸುವುದೆಂಬ ಅಂಶ ಬೆಳಕಿಗೆ ಬಂದಂತೆ ಶಿಕ್ಷಣ ಸಂಸ್ಥೆಗಳು ಅಸ್ತಿತ್ವಕ್ಕೆ ಬರಹತ್ತಿವೆಯಷ್ಟೆ. ಅಂಥ ಸಂಸ್ಥೆಗಳಲ್ಲಿ ಫ್ರೊಬೆಲ್ಲನ ಕಿಂಡರ್‍ಗಾರ್ಟನ್ ಮೊಟ್ಟಮೊದಲು ಅಸ್ತಿತ್ವಕ್ಕೆ ಬಂದ ಶಿಶುಶಾಲೆ. ಕಳೆದ ಶತಮಾನದ ಕೊನೆಯ ವೇಳೆಗೆ ಶಾಲೆಗಳು ಜರ್ಮನಿಯಲ್ಲೂ ಯೂರೋಪಿನ ಇತರ ದೇಶಗಳಲ್ಲೂ ಈ ಶತಮಾನದ ಆರಂಭದಲ್ಲಿ ಅಮೆರಿಕದಲ್ಲೂ ಇತರ ದೇಶಗಳಲ್ಲೂ ಆರಂಭವಾದುವು. ಆ ವೇಳೆಗೆ ಇಂಗ್ಲೆಂಡಿನಲ್ಲೂ ಅದರ ವಸಾಹತುಗಳಲ್ಲೂ ಮಾರ್ಗರೆಟ್ ಮ್ಯಾಕ್ಮಿಲನ್ ಎಂಬಾಕೆ ಪ್ರಚಾರಕ್ಕೆ ತಂದ ನರ್ಸರಿ ಶಾಲೆಗಳು (ಶಿಶುವಿಹಾರಗಳು) ಹೆಚ್ಚು ಪ್ರಚಾರಕ್ಕೆ ಬಂದು ಜನಪ್ರಿಯವಾದವು. ಸದ್ಯದಲ್ಲಿ ಕಿಂಡರ್‍ಗಾರ್ಟನ್ ಶಾಲೆಗಳು ಜರ್ಮನಿಯಲ್ಲೂ ಯೂರೋಪಿನ ಇತರ ದೇಶಗಳಲ್ಲೂ ಆಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲೂ ಪ್ರಚಾರದಲ್ಲಿವೆ. ಫ್ರೊಬೆಲ್ ಆರಂಭಿಸಿದ ಮೂಲರೂಪದ ಕಿಂಡರ್‍ಗಾರ್ಟನ್ ಶಾಲೆಗಳನ್ನು ಮಾರ್ಪಡಿಸಿಕೊಂಡು ಅಮೆರಿಕದಲ್ಲಿ ದೇಶಾದ್ಯಂತವೂ ಪ್ರಚಾರಕ್ಕೆ ತರಲಾಗಿದೆ. ಅಂಥ ಶಾಲೆಗಳ ವಿವರಗಳನ್ನು ಕೆಳಗೆ ಕೊಡಲಾಗಿದೆ.

 ಆಧುನಿಕ ಕಿಂಡರ್‍ಗಾರ್ಟನ್: ಈ ಶಾಲೆಗಳಲ್ಲಿ ಫ್ರೊಬೆಲ್ಲನ ತತ್ತ್ವದೃಷ್ಟಿಯನ್ನು ಅನುಸರಿಸಿದರೂ ಮಕ್ಕಳನ್ನು ಆಧ್ಯಾತ್ಮಿಕ ಜೀವನಕ್ಕೆ ಸಿದ್ಧಪಡಿಸುವುದೇ ಶಿಕ್ಷಣದ ಪ್ರಧಾನ ಗುರಿಯೆಂಬ ಅಂಶವನ್ನಿವು ಒಪ್ಪುವುದಿಲ್ಲ. ಆಟದ ಆಸಕ್ತಿಯನ್ನು ಚಟವಟಿಕೆಯ ಕಾರ್ಯಗಳಿಗಾಗಿ ಬಳಿಸಿಕೊಂಡು ಮಕ್ಕಳು ಅವರಿಗೊಪ್ಪುವ ಸಂಘ ಜೀವನವನ್ನು ನಡೆಸುವಂತೆ ಮಾಡುವುದೇ ಅವುಗಳ ಉದ್ದೇಶವೆಂದೀಗ ಒಪ್ಪಲಾಗಿದೆ. ನಾಲ್ಕು ವರ್ಷದ ಮಕ್ಕಳು ಆಗಲೇ ಮನೆಯಲ್ಲಿ ಸಾಧಿಸಿರುವ ಅನುಭವಗಳಲ್ಲಿ ಪ್ರಗತಿದಾಯಕವೆನಿಸಿದವನ್ನು ಆರಿಸಿ ಅಲ್ಲಿ ಬೆಳೆಸುವರು. ದೇಹಪೋಷಣೆಗೆ ಆಗತ್ಯವಾದ ಆಹಾರ, ನಿದ್ರೆ, ವಿಶ್ರಾಂತಿ ಮುಂತಾದವುಗಳ ಕಡೆ ಹೆಚ್ಚಿನ ಗಮನಕೊಡುವರು. ಮಕ್ಕಳ ನಡೆನುಡಿಗಳಲ್ಲಿ ಉಚಿತ ಅಭ್ಯಾಸಗಳನ್ನು ಮೂಡುಸುವಂಥ ಸನ್ನಿವೇಶಗಳನ್ನು ರಚಿಸುವರು. ಐದು ವರ್ಷ ತುಂಬಿದ ಮಕ್ಕಳಿಗೆ ಓದುಬರಹ ಲೆಕ್ಕಗಳನ್ನು ಕಲಿಸುವಾಗಲೂ ಆಟಕ್ಕೆ ಪ್ರಾಶಸ್ತ್ಯವಿತ್ತೇ ಕಾರ್ಯಕ್ರಮಗಳನ್ನು ರಚಿಸಿಕೊಳ್ಳುವರು.

 ಕಾರ್ಯಕ್ರಮ: ವರ್ತನೆ, ನುಡಿ. ಚಿತ್ರ. ಆಟ-ಇತ್ಯಾದಿಗಳ ಮೂಲಕ ಮಕ್ಕಳು ಚಟುವಟಿಕೆಯಿಂದಿರುವಂತೆ ಮಾಡಿ ಅವರು ತಮ್ಮ ಮನೋಭಾವಗಳನ್ನು ವ್ಯಕ್ತಪಡಿಸುವಂತೆ ಮಾಡಲು ಅವಕಾಶ ಕಲ್ಪಿಸುವುದೇ ಕಿಂಡರ್‍ಗಾರ್ಟನ್ ಶಾಲೆಯ ಮುಖ್ಯ ಕಾರ್ಯಕ್ರಮ. ಆಗ ಅವರ ಪರಿಶೀಲನಾಸಕ್ತಿ, ಸಂಗ್ರಹಣಶಕ್ತಿ, ರಚನಾಸಕ್ತಿ ಮುಂತಾದವು ಪ್ರಕಾಶಕ್ಕೆ ಬರುತ್ತವೆ. ಅನುಕರಣಶಕ್ತಿ ತೀವ್ರವಾಗಿರುವುದರಿಂದ ತಮ್ಮ ಮುಂದಿನ ಜೀವನಕ್ಕೆ ಅಗತ್ಯವೆನಿಸುವ ನಡೆ, ನುಡಿ, ವರ್ತನೆ, ಮನೋಭಾವ ಇವನ್ನೆಲ್ಲ ಅಧ್ಯಾಪಕರ ಮೇಲ್ಪಂಕ್ತಿಯನ್ನು ನೋಡಿ ಅವರು ರೂಢಿಸಿಕೊಳ್ಳವರು. ಆದರೆ ಮಕ್ಕಳ ಮೇಲೆ ಆ ಕಲಿವನ್ನು ಆಧ್ಯಾಪಕರು ಕೃತಕವಾಗಿ ಹೇರಬಾರದು. ಸ್ವಾಭಾವಿಕವಾಗಿ ಸನ್ನಿವೇಶದ ರಚನೆಯಿಂದ ಅದು ಸಾಧಿತವಾಗುವಂತೆ ನೋಡಿಕೊಳ್ಳಬೇಕು.

 ಆಟಗಳ ಮೂಲಕ ಅನುಭವಸಾಧನೆ: ಆಟದ ಮೂಲಕ ಮಕ್ಕಳಿಗೆ ತೃಪ್ತಿ ಸಂತೋಷಗಳನ್ನು ದೊರಕಿಸುವುದಲ್ಲದೆ ಅಗತ್ಯ ಕಲಿವನ್ನೂ ಸಾಧಿಸಬೇಕು. ಈ ಗುರಿ ಈಡೇರುವಂತೆ ಅವನ್ನು ನಿರ್ದಿಷ್ಟ ರೀತಿಯಲ್ಲಿ ನಿಯೋಜಿಸಿರಬೇಕಾಗುತ್ತದೆ. ಆ ಆಟಗಳಲ್ಲಿ ಎರಡು ವಿಧ: ಸ್ವತಂತ್ರವಾಗಿ ಆಡುವ ಆಟಗಳು; ಅಧ್ಯಾಪಕರ ನೇತೃತ್ವದಲ್ಲಿ ಆಡುವ ಆಟಗಳು. ನಿತ್ಯವೂ ಮಕ್ಕಳು ಮನಬಂದ ಆಟಗಳನ್ನು ಆಡಲು ನಿರ್ದಿಷ್ಟಕಾಲ ಗೊತ್ತುಮಾಡಿರುವರು. ಮಕ್ಕಳ ಕಣ್ಣಿಗೆ ಬೀಳುವಂತೆ ಬಗೆಬಗೆಯ ಆಟದ ಸಾಮಾನುಗಳನ್ನು ಇರಿಸಿರುವರು. ತಮಗಿಷ್ಟ ಬಂದವನ್ನು ಆಯ್ದುಕೊಂಡು ಆಡುವಾಗ ಅವರ ಇಂದ್ರಿಯಪಾಟವ, ಹಸ್ತಕೌಶಲ, ಅಂಗಚಲನೆ ಇವೆಲ್ಲ ಕುದುರುತ್ತವೆ. ಆಟ ಮುಗಿದ ಮೇಲೆ ಸಾಮಾನುಗಳನ್ನು ಮತ್ತೆ ಒಪ್ಪವಾಗಿ ಇರಿಸುವ ಅಭ್ಯಾಸವನ್ನೂ ಬೆಳೆಸಲಾಗುತ್ತದೆ.

 ಲಯಬದ್ಧ ಚಟುವಟಿಕೆಗಳು: ಲಯಬದ್ಧ ಸನ್ನಿವೇಶಗಳಿಂದ ಮಕ್ಕಳ ಆಸಕ್ತಿಯನ್ನು ಪ್ರಚೋದಿಸಿ ಚಟುವಟಿಕೆಯಿಂದಿರಿಸುವುದು ಕಿಂಡರ್‍ಗಾರ್ಟನ್ ಕಾರ್ಯಕ್ರಮದಲ್ಲಿ ಸೇರಿದೆ. ಅಂಥ ಸನ್ನಿವೇಶಗಳ ತಾಳಲಯಗಳಿಗೆ ಉತ್ಸಾಹಗೊಂಡು ಅವಕ್ಕೆ ಸರಿಯಾಗಿ ತಮ್ಮ ಮನೋಭಾವಗಳನ್ನು ಮಕ್ಕಳು ಪ್ರದರ್ಶಿಸುವರು; ಸಂಗೀತ, ಚಿತ್ರ, ಹಾಡು, ಕವಿತೆ ಇತ್ಯಾದಿ ಸನ್ನಿವೇಶಗಳನ್ನು ಬಳಸಿಕೊಂಡು ಆಧ್ಯಾಪಕರ ನಿರ್ದೇಶನದಲ್ಲಿ ಮಕ್ಕಳು ಸಾಮೂಹಿಕ ಆಟದಲ್ಲಿ ತೊಡಗುವರು. ಮಕ್ಕಳು ತಾಳವಿಕ್ಕಿದಂತೆ ಹೆಜ್ಜೆಯಿಡುವರು; ಕಂಠನಾದ ಮಾಡುವರು; ಚಪ್ಪಾಳೆಯಿಕ್ಕುವರು; ಮೂಖದಂತೆ ಭಂಗಿ ಮಾಡುವರು; ಅಂಗಗಳನ್ನು ಚಲಿಸುವರು. ಆಗ ಅವರ ಭಾವಪ್ರಕಾಶಕ್ಕೆ ಅವಕಾಶವಾಗುವುದು. ಪ್ರಾಸಬದ್ಧ ಗೀತೆಗಳಿಗೆ ಮಕ್ಕಳು ಲಯಬದ್ಧವಾಗಿ ವರ್ತಿಸುವುದರಿಂದ ಅಲ್ಲಿ ಅವುಗಳನ್ನು ಯಥೇಚ್ಛವಾಗಿ ಬಳಸಲಾಗುವುದು. ಅಂಗಸಾಧನೆ, ಸಂಖ್ಯಾ ಪರಿಚಯ, ಪದಾರ್ಥಜ್ಞಾನ ಇತ್ಯಾದಿಗಳನ್ನು ಅಧ್ಯಾಪಕರೇ ನಿರ್ದೇಶಿಸಿ ಒತ್ತಾಯವಾಗಿ ಬೋಧಿಸದೆ ಸೂಕ್ತರೀತಿಯ ಲಯಬದ್ಧ ಸನ್ನಿವೇಶಗಳ ಮೂಲಕ ಅವನ್ನು ಬೋಧಿಸುವರು. ಅಂಥ ಗೀತೋಪಕರಣಗಳಲ್ಲಿ ಕಾರ್ಯಪ್ರಧಾನ ಗೀತೆಗಳು ಮುಖ್ಯವಾದವು. ಗೀತೆಯನ್ನು ಪಠಿಸುವಾಗ ಮಕ್ಕಳು ಅದರ ಅರ್ಥವನ್ನು ವರ್ತನೆಯಲ್ಲಿ ಪ್ರಕಟಿಸುವರು. ಅಂಥ ಗೀತೆಗಳಲ್ಲಿ ಪದಗಳು ಕಠಿಣವಾಗಿರದೆ ಲಯಬದ್ಧವಾಗಿ ಭಾವಗಳನ್ನು ಪ್ರಚೋದಿಸುವಂತಿರುತ್ತವೆ. ನೃತ್ಯಗಳಲ್ಲಿ ಬಳಸುವ ಗೀತೆಗಳಲ್ಲೂ ಅದನ್ನು ಕಾಣಬಹುದು ಅಲ್ಲದೆ ತಂಬೂರಿ ತಾಳ, ತಮಟೆ, ಜಿಂಗಲ್ ಬೆಲ್ ಮುಂತಾದವನ್ನೂ ಬಳಸಲಾಗುವುದು.

 ಕಿಂಡರ್‍ಗಾರ್ಟನ್ ಉಪಕರಣಗಳು: ಕೀಲುಕುದರೆ, ಜಾರುಗುಪ್ಪೆ, ತಳ್ಳುವ ಗಾಡಿ, ಜಿಗಿಯುವ ಹಗ್ಗ, ತೂಗುತೊಲೆ, ಜಗ್ಗುಮಣೆ, ಉಯ್ಯಾಲೆ, ಗಾಳಿಗಿರಕ, ರೈಲು, ವಿಮಾನ ಮುಂತಾದ ಬಗೆಬಗೆಯ ಸಾಮಾನುಗಳನ್ನು ಅಲ್ಲಿ ಆಟಕ್ಕೆ ಬಳಸುವರು. ಅವು ಆಟದ ಸಾಮಾನುಗಳಂತಿದ್ದರೂ ಮಕ್ಕಳ ದೇಹದ ಬೆಳೆವಣಿಗೆಗೂ ಮನಸ್ಸಿನ ವಿಕಾಸಕ್ಕೂ ಅಗತ್ಯ ಪ್ರಚೋದನೆ ದೊರಕಿಸುವಂತೆ ಅವು ರಚಿತವಾಗಿರುತ್ತವೆ. ಅವುಗಳಲ್ಲಿ ಆಸಕ್ತಿ ಬೆಳೆದಂತೆ ಅವನ್ನು ಅಥವಾ ಅವುಗಳ ಮಾದರಿಗಳನ್ನು ತಾವೇ ಮಾಡಿಕೊಳ್ಳಲು ಮಕ್ಕಳಿಗೆ ಅವಕಾಶ ಕಲ್ಪಿಸಲಾಗುವುದು. ಅದಕ್ಕಾಗಿ ಜೇಡಿಮಣ್ಣು, ಕಾಗದ, ಹಲಗೆ, ಹಗ್ಗ ಮುಂತಾದವನ್ನು ಒದಗಿಸುವರು. ಆ ಮೂಲಕ ಅವರ ಅಭಿವ್ಯಕ್ತಿ ಗುಣ, ಹಸ್ತಕೌಶಲ, ನೇತ್ರಪಟುತ್ವ, ರಚನಾಶಕ್ತಿ ಇವೆಲ್ಲ ವೃದ್ಧಿಯಾಗುವುವು.

 ಪಠ್ಯವಸ್ತು: ಮೊದಲು ಎರಡು ಮತ್ತು ಮೂರನೆಯ ವಯಸ್ಸಿನ ತರಗತಿಗಳಿಗೆ ಯಾವ ಪಠ್ಯಕ್ರಮವೂ ಇರುವುದಿಲ್ಲ. ಮುಂದೆ ಪ್ರಾಥಮಿಕ ಶಾಲೆಯ ವಯಸ್ಸಿನ ಮಕ್ಕಳಿಗೆ ಓದುಬರಹ ಲೆಕ್ಕಗಳನ್ನು ಕಲಿಸಬೇಕಾಗುತ್ತದೆ. ಇಲ್ಲವಾದರೆ ಅವರು ಸಾಂಪ್ರದಾಯಿಕ ಪಾಠಶಾಲೆಯ ಮಕ್ಕಳೊಡನೆ ಸರಿದೂಗಲಾರರು. ಆದರೂ ಅದಕ್ಕಾಗಿ ನಿರ್ದಿಷ್ಟ ಪಠ್ಯವಸ್ತುವೇನೂ ಇರುವುದಿಲ್ಲ. ಓದು ಬರಹ ಲೆಕ್ಕಗಳನ್ನು ಕೇವಲ ಪ್ರಾಸಂಗಿಕವಾಗಿ ಕಲಿಸುವರು. ನಾಳೆ ಶಾಲೆಗೆ ರಜ. ಇದು ಆಟದ ಕಾಲ, ಸೋಮವಾರ ಜಾತ್ರೆ ಇತ್ಯಾದಿ ಸೂಚನೆಗಳನ್ನು, ತಿಳಿಸುವ ರೂಪದಲ್ಲಿ ಓದನ್ನು ಕಲಿಸುವರು; ಅಗತ್ಯವಾದಾಗ ಮಕ್ಕಳು ಬರೆಯುವಂತೆ ಮಾಡಿ ಬರವಣಿಗೆ ಕಲಿಸುವರು. ಮರದ ತುಂಡುಗಳ ಜೋಡಣೆ, ಆಟದ ಸಾಮಾನುಗಳ ಎಣಿಕೆ, ಅವುಗಳ ಹರಡುವಿಕೆ ಮುಂತಾದ ಸನ್ನಿವೇಶಗಳಲ್ಲಿ ಸಂಖ್ಯಾಪರಿಚಯ ಮತ್ತು ಲೆಕ್ಕಗಳನ್ನು ಕಲಿಸಲಾಗುವುದು.

 ಹಸ್ತಕೌಶಲವನ್ನು ಬೆಳೆಸಲು ದೊಡ್ಡವರ ಕಸುಬುಗಳಿಗೆ ಬದಲು ಮಕ್ಕಳ ಆಸಕ್ತಿಯ ಉದ್ಯಮಗಳನ್ನೇ ಆಚರಿಸಲು ಅವಕಾಶವಿರುವುದು ಇಂಥ ಶಾಲೆಗಳ ಗಮನಾರ್ಹವಾದ ಅಂಶ. ಸಾಮೂಹಿಕ ಆಟಗಳನ್ನಾಡುವಾಗ ಅವರಲ್ಲಿ ಸಮಾಜ ಜೀವನಕ್ಕೆ ಅಗತ್ಯವಾದ ಭಾವನೆ, ವರ್ತನೆ, ಆಲೋಚನೆ ಮುಂತಾದವನ್ನೆಲ್ಲ ಬೆಳಸಲಾಗುವುದು. ನೇರವಾಗಿ ಸಮಾಜ ಪರಿಜ್ಞಾನವನ್ನಾಗಲಿ ಪೌರನೀತಿಯನ್ನಾಗಲಿ ಬೋಧಿಸುವುದಿಲ್ಲ. ಕಥೆ ಹೇಳುವುದನ್ನು ಕಾರ್ಯಕ್ರಮದಲ್ಲಿ ಸೇರಿಸಿದ್ದರೂ ಅದು ನೀತಿಬೋಧೆಗಾಗಲ್ಲ, ಮಾತಾಡುವ ಶಕ್ತಿಯನ್ನು ಬೆಳೆಸುವುದಕ್ಕೆ, ಕಲ್ಪನಾಶಕ್ತಿಯನ್ನು, ಪ್ರತಿಭೆಯನ್ನು, ಜ್ಞಾಪಕ ಶಕ್ತಿಯನ್ನು ಕುದುರಿಸುವುದಕ್ಕೆ, ಬಣ್ಣಹಾಕುವುದು, ಚಿತ್ರ ಬರೆಯುವುದು, ಮಾದರಿ ರಚಿಸುವುದು ಇತ್ಯಾದಿ ಕಾರ್ಯಕ್ರಮಗಳ ಮೂಲಕ ಅದರ ಕಲಾಭಿರುಚಿಯನ್ನು ಬೆಳೆಸುವರು.

 ಕೆಲವು ದಶಮಾನಗಳಿಂದೀಚೆಗೆ ಕಿಂಡರ್‍ಗಾರ್ಟನ್ ಶಾಲೆಗಳ ಉತ್ತರಾರ್ಧದಲ್ಲಿ ಪ್ರಾಥಮಿಕ ಶಾಲೆಯ ಪಠ್ಯವಸ್ತುವನ್ನೇ ಗೊತ್ತುಮಾಡಿಕೊಂಡು ಅಲ್ಲಿನಂತೆ ವೇಳಾಪಟ್ಟಿಗಳನ್ನೂ ರಚಿಸಿಕೊಳ್ಳುವುದು ಕಂಡುಬರುತ್ತಿದೆ. ಅಕ್ಕಪಕ್ಕಗಳಲ್ಲಿರುವ ಪ್ರಾಥಮಿಕ ಶಾಲೆಯಿಂದ ಹೊರಬರುವ ಮಕ್ಕಳಿಗಿಂತ ತಮ್ಮ ಮಕ್ಕಳು ಸಾಂಪ್ರದಾಯಿಕ ವಿದ್ಯೆಯಲ್ಲಿ ಸರಿದೂಗುವಂತಾಗಬೇಕೆಂಬ ಸ್ಪರ್ಧೆಯೇ ಇದಕ್ಕೆ ಕಾರಣವೆನ್ನಬಹುದು.   

 (ನೋಡಿ- ನರ್ಸರಿ-ಶಾಲೆ)

 (ನೋಡಿ- ಪ್ರಾಥಮಿಕ-ಪೂರ್ವದ-ಶಿಕ್ಷಣ)       

(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ